ಕನ್ನಡ ನಾಡು | Kannada Naadu

ಮಳೆಯ ಆರ್ಭಟಕ್ಕೆ ಹೈರಾಣದ  ದುಬೈ

20 Apr, 2024

ದುಬೈ: ಮರುಭೂಮಿಗಳ ದೇಶಗಳಲ್ಲಿ ವರುಣ ತನ್ನ ಅಬ್ಬರದ ಹೆಚ್ಚಾಗಿ ಜನ ಜೀವನ ಅಸ್ಥವ್ಯಸ್ಥ ಮಾಡಿಬಿಟ್ಟಿದ್ದಾನೆ. ಕೊಲ್ಲಿ ರಾಷ್ಟ್ರದ ಇತಿಹಾಸದಲ್ಲೇ ಅತಿದೊಡ್ಡ ಮಳೆಗೆ ತತ್ತರಿಸಿರುವ ದುಬೈ ನಗರದಲ್ಲಿ ಪರಿಹಾರ ಕಾರ್ಯ ಭರದಿಂದ ಸಾಗಿದ್ದರೂ ನಗರ ಇನ್ನೂ ಜಲಾವೃತವಾಗಿಯೇ ಇದೆ. ನಾಲ್ಕು ದಿನಗಳ ಹಿಂದೆ ಸುರಿದ ಮಳೆಗೆ ದುಬೈ ಸೇರಿ ಯುಎಇ ನ ಕೆಲವು ನಗರಗಳು ಜಲಾವೃತವಾಗಿ ಅಕ್ಷರಶ: ತತ್ತರಿಸಿ ಹೋಗಿವೆ.
        ಅತ್ಯಂತ ಜನನಿಬಿಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದೇ ಖ್ಯಾತಿ ಗಳಿಸಿರುವ ದುಬೈ ವಿಮಾನ ನಿಲ್ದಾಣದಲ್ಲಿ ಕೊಂಚ ಮಳೆ ತಗ್ಗಿದ ಹಿನ್ನಲೆಯಲ್ಲಿ ಸಣ್ಣ ಪ್ರಮಾಣದಲ್ಲಿ ಸಂಚಾರ ಆರಂಭಿಸಲಾಗಿದೆ. ಮೊದಲ ಆದ್ಯತೆಯಾಗಿ ದುಬೈ ಮೂಲಕ ತೆರಳುವವರನ್ನು ಎಮಿರೇಟ್ ವಿಮಾನಗಳು ಅವರ ಗಮ್ಯ ಸ್ಥಾನಕ್ಕೆ ತಲುಪಲು ಸಿದ್ಧತೆ ಕೈಗೊಂಡಿವೆ. ಆದರೆ ನಗರದ ರಸ್ತೆಗಳು ಇನ್ನೂ ಜಲಾವೃತವಾಗಿರುವ ಕಾರಣ ವಿಮಾನ ಸಿಬ್ಬಂದಿ ಸಕಾಲದಲ್ಲಿ ವಿಮಾನ ನಿಲ್ದಾಣಕ್ಕೆ ತಲುಪಲು ಸಾಧ್ಯವಾಗದೆ ವಿಮಾನಗಳು ವಿಳಂಬವಾಗಿ ಸಂಚರಿಸುತ್ತಿವೆ. ಇದರ ನಡುವೆ ಯುನೈಟೆಡ್‌ ಅರಬ್ ಎಮಿರೇಟ್ಸ್‌ನಲ್ಲಿ ಎಲ್ಲ ಶಾಲಾ ಕಾಲೇಜುಗಳಿಗೆ ಒಂದು ವಾರಗಳ ಕಾಲ ರಜೆ ಘೋಷಿಸಲಾಗಿದೆ. ದುಬೈನಲ್ಲಿ ಸೋಮವಾರ-ಮಂಗಳವಾರ 25 ಸೆಂ.ಮೀನಷ್ಟು ಮಳೆ ಸುರಿದಿತ್ತು. ಇದು ದೇಶದಲ್ಲಿ ಒಂದಿಡೀ ವರ್ಷಕ್ಕೆ ಸುರಿಯುವ ಮಳೆಗೆ ಸಮ. ಹೀಗಾಗಿ ಪರಿಸ್ಥಿತಿ ನಿರ್ವಹಿಸಲಾಗದೇ ಅಧಿಕಾರಿಗಳು ಕಂಗಾಲಾಗಿದ್ದಾರೆ.


ಇದುವರೆಗೆ  142 ಮಿಲಿಮೀಟರ್‌ಗಳಿಗಿಂತ ಹೆಚ್ಚು (5.59 ಇಂಚುಗಳು) ಮಳೆ ಆಗಿದೆ. ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸರಾಸರಿ 94.7 ಮಿಲಿಮೀಟರ್ (3.73 ಇಂಚು) ಮಳೆ ಬಿದ್ದಿದೆ. ದೇಶದ ಇತರ ಪ್ರದೇಶಗಳು ಇನ್ನೂ ಹೆಚ್ಚಿನ ಮಳೆಯಾಗಿದೆ. UAE ಯ ಒಳಚರಂಡಿ ವ್ಯವಸ್ಥೆಗಳು ಮುಳುಗಿದ್ದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ದುಬೈ ಮೂಲಕ ಹಾದು ಹೋಗುವ 12-ಲೇನ್ ಶೇಖ್ ಜಾಯೆದ್ ರಸ್ತೆ ಹೆದ್ದಾರಿ ಸಹ ಪ್ರವಾಹಕ್ಕೆ ಒಳಗಾಗಿದೆ.


ನಿಧಾನವಾಗಿ ಶುರುವಾದ ಮಳೆ, ನೋಡನೋಡುತ್ತಿದ್ದಂತೆ ಮುಸಲಧಾರೆಯ ಸ್ವರೂಪ ಪಡೆಯಿತು. ಮೊದಲು ದುಬೈಯಿನ ತಗ್ಗು ಪ್ರದೇಶಗಳು ಜಲಾವೃತಗೊಂಡರೆ, ಆನಂತರದಲ್ಲಿ ಇತರ ಸಮತಟ್ಟಾದ ಪ್ರಾಂತ್ಯಗಳಲ್ಲಿಯೂ ನೀರು ನಿಲ್ಲಲಾರಂಭಿಸಿತು. ನಿಧಾನವಾಗಿ ನಗರಗಳಲ್ಲಿನ ರಸ್ತೆಗಳು, ಫುಟ್ ಪಾತ್ ಗಳು, ನಗರದಾಚೆಗಿನ ರಸ್ತೆಗಳು, ಹೈವೇಗಳು ಎಲ್ಲವೂ ಜಲಾವೃತವಾದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸಹಾಯವಾಣಿ: ಈ ನಡುವೆ ಮಳೆ ಸಂಬಂಧಿ ಸಮಸ್ಯೆಗೆ ಸಿಕ್ಕಿಹಾಕಿಕೊಂಡಿರುವ ಭಾರತೀಯರಿಗಾಗಿ ದುಬೈನಲ್ಲಿನ ಭಾರತೀಯ ದೂತಾವಾಸ ಕಚೇರಿ ಸಹಾಯವಾಣಿ ತೆರೆದಿದೆ. ಅವುಗಳ ಸಂಖ್ಯೆ ಹೀಗಿದೆ- 71501205172, 71569950590, 71507347676, 71585754213

Publisher: ಕನ್ನಡ ನಾಡು | Kannada Naadu

Login to Give your comment
Powered by